ನೀನೇಕೆ
ನನ್ನಿಂದ ಆ ದೂರ ಓಡುವೆ
ಆಗದೆ
ನಿನ್ನಿಂದ ಹಿಂತಿರುಗಿ ಬರಲು
ನೀ ಬಾರದೆ
ನಾನೆಲ್ಲಿ ಹೋಗಲಿ
ನೀ
ಕಾಣದೆ ನಾನ್ಯಾರ ನೋಡಲಿ
ಓಡೆನು
ನಾನು ನಿನ್ನಿಂದ ಬಹು ದೂರ
ಆಗದು
ನನ್ನಿಂದ ತಿರುತಿರುಗಿ ನೋಡಲು
ನೀ
ಕೇಳದೆ ನಾನೆಲ್ಲಿ ನುಡಿಯಲಿ
ನೀ
ಕೊಡದೆ ನಾನ್ಯಾರ ಕೇಳಲಿ
ಬರಬಾರದೆ
ನೀನು ಒಂಚೂರು ತಿರುಗಿ
ನೋಡಬಾರದೆ
ನನ್ನ ಒಂಚೂರು ಕೆದಕಿ
ಅದೆಷ್ಟು
ಹುಡುಕಲಿ ನನ್ನ ಮನವ
ಇಷ್ಟು
ದಿವಸ ನನಗಾಗಿ ಕಾದಿರುವೆ
ಇನ್ನೆರಡು
ದಿವಸ ನಿನಗೆ ಭಾರವೇ
ಇಷ್ಟು
ಘಳಿಗೆ ನನಗಾಗಿ ಸವೆಸಿರುವೆ
ಇನ್ನೆರಡು
ಘಳಿಗೆ ನಿನಗೆ ದೂರವೇ
ನನ್ನ
ಕಾಯಿಸುವಲ್ಲಿ ನಿನಗೆಂತ ಆನಂದ
ನನ್ನ
ಬೇಯುಸುವಲ್ಲಿ ನಿನದೆಂತ ಆಲಾಪ
ಸಾಕು
ಮಾಡು ಈ ಗೆಲುವಿರದ ಹಗೆತನ
ಹುಡುಕದಿರು
ದಿನವೂ ಬಗೆಬಗೆಯ ಹೊಸತನ
ನೀನಿರದೆ
ಆ ಮೌನ ಕಳೆಯಲು
ಮಾಡಿರುವೆ
ಚಂದಿರನ ಗೆಳೆತನ
ನಿನ್ನ
ಕಾಣಲು ಕಣ್ಣಿಟ್ಟು ನೋಡಲು
ಕೇಳುವನು
ತಂಪಿರದೆ ಈ ಹೊಸತನ
ನಂಬದಿರು
ಚೋರ ಚಂದಿರನ ಆಟಕೆ
ಸಾಗರನ
ಕೂಗಿಗೆ ಮಿರಿಮಿರಿ ಹಿಗ್ಗುವನು
ಬಾಗದಿರು
ಅವನ ಸೋಗು ಮಾತಿಗೆ
ಸೂರ್ಯನ
ಬಿಸಿಗೆ ಕಿರಿಕಿರಿ ಕುಗ್ಗುವನು
ಅಮವಾಸೆಯ
ರಜೆಯಲಿ ಹುಡುಕಿ
ತರುವನಂತೆ
ಏಳು ಸಾಗರ ಮುತ್ತ
ಹುಣ್ಣಿಮೆಯ
ಬೆಳಕಲಿ ಪೋಣಿಸಿ
ಏರಿಸುವನಂತೆ
ನನ್ನ ಕೊರಳ ಸುತ್ತ
ನನ್ನ
ಒಲವು ಜಗವ ಬೆಳಗದು
ಕ್ಷಣವೂ
ನೋಡದು ನಿನ್ನ ಜೀವ ಬೇಯಲು
ನನ್ನ
ಎತ್ತರ ಲೋಕವು ನೋಡದು
ಕ್ಷಣವೂ
ಬಿಡದು ನಿನ್ನ ಕಣ್ಣು ಹನಿಯಲು
ಬಂದುಬಿಡು,
ಹೊತ್ತು
ಮುಳುಗುವ ಮುನ್ನ
ಬೆಳಕ
ಆರಿ ಕತ್ತಲು ಆವರಿಸುವ ಮುನ್ನ
- ಬುರುಡೆದಾಸ
Comments
Post a Comment