ಕರಡಿ ಆಡಿಸುವ ಬಂದಿದ್ದಾನೆ


ಕೂಗಿದಳು ಅಕ್ಕ
ನೋಡು ಬಾ
ಕರಡಿ ಆಡಿಸುವ ಬಂದಿದ್ದಾನೆ
ಅದೇ ತಳಮಳ, ಅದೇ ಹೆದರಿಕೆ
ಕೂತಾಗ ಮೇಲೆ
ಹಿಡದ ದಾರವ ಸಿಗಿದೊಗೆದು
ಕೆಳಗೆ ತಡವಿ ಪರಚಿದರೆ ?
ತನ್ನ ಒರಟು ಕರಡಿ ಭಾಷೆಯಲಿ
ನಾನು ನಿನ್ನ ಆಟಿಕೆಯ ರಿಮೋಟ್ ಕಾರೆ ?
ಎಂದರೆ, ನಾನೇನು ಉತ್ತರಿಸಲಿ ?
ನನಕ್ಕ, ಮೇಲೆ ಕೂತು
ಒಂದು ರೌಂಡು ಹೋಗಿ ಬಾ
ಧೈರ್ಯ ಬರುತ್ತೆ ಎಂದಳು
ಅದಕ್ಕೆ ಮೇಲೆ ಕೂತೆ, ಎನ್ನಲೇ ?
ನಿನ್ನ ಮೃದು ಕೂದಲ ಸವರಿ
ಕತ್ತ ಬಿಗಿದಪ್ಪಿ ಕ್ಷಣವಾದರೂ
ಅರ್ಥವಾಗದ ಆ ಭಾಷೆಯಲಿ ನಿನೊಡನೆ
ಹರಟುವ ತೆವಲು ಎನ್ನಲೇ ?
ಏನೇ ಇರಲಿ, ಈ ಬಾರಿ
ಧೈರ್ಯ ಮಾಡಿ ನಿನ್ನ ಬೆನ್ನೆರುವೆ
ಕಳೆದ ಸಾರಿಯಂತೆ ಗುರುಗುಟ್ಟಿ
ಹೆದರಿಸಬೇಡ, ಬೇಕೆಂದರೆ
ನನ್ನ ಪಾಲಿನ ಒಂದು ಚಾಕಿ ಕೊಡುವೆ
-      ಬುರುಡೆದಾಸ


Comments