ಕಾಮನ ಬಿಲ್ಲೇಕೆ ಅರ್ಧ ?



ಕಾಮನ ಬಿಲ್ಲೇಕೆ ಅರ್ಧ ?
ಪೂರ್ತಿ ನೋಡುವ ಆಸೆ ನಿನಗಿಲ್ಲವೆ ?

ನಗುಮೊಗದಿ, ಕೈಕುಲುಕಿ
ಹೊಸ ಬಟ್ಟೆ ಉಟ್ಟು, ಸಿಹಿ ಉಗ್ಗಿ ಉಂಡು,
ಎಲ್ಲರೊಟ್ಟಿಗೆ ಕೂಡಿ ನಲಿದಾಡಿದ
ಆ ಘಳಿಗೆಗಳಷ್ಟೇ..., ನಿನಗಿಷ್ಟ!
ಯಾಕೆ ? ದಿಂಬಿಗೆ ಮೊಗವಿಟ್ಟು
ಕತ್ತಲೆ ಕೋಣೆಯಲಿ ಬಿಕ್ಕಿ ಬಿಕ್ಕಿ 
ಒಬ್ಬನೇ ಅತ್ತ ಆ ಕ್ಷಣಗಳು..., ನಿನ್ನವಲ್ಲವೆ ?

ನಿಜ ಮೊಗವ ಮರೆಮಾಚಿ
ದಿನವೊ ಸುಳ್ಳು ಹೇಳಿ
ನಿನ್ನದಲ್ಲವೆನ್ನುವಂತೆ, ಸತ್ತು ಗಳಿಸದ
ಕೋಟಿಗಳಷ್ಟೇ..., ನಿನಗೆ ಮಾನ್ಯ!
ಯಾಕೆ ? ಎರಡು ಹೊತ್ತು ಉಟಕ್ಕೆ
ನಿನ್ನದೆನ್ನಿಸುವಂತೆ ಬೆವರು ಸುರಿಸಿ
ದುಡಿದ ಬಿಡಿಗಾಸು..., ನಿನ್ನದಲ್ಲವೆ ?

ನೀನು ಗೆದ್ದ ಸಾಮ್ರಾಜ್ಯಗಳಿಗೆ 
ಗಳಿಸಿದ ಹೊನ್ನು ಚಿನ್ನ ಹೆಣ್ಣುಗಳಿಗೆ
ಚಪ್ಪಾಳೆ ತಟ್ಟಿ ಉಲ್ಲಾಸದಿ ಕೂಗಿದ
ಹರ್ಷೋದ್ಗಾರಗಳಷ್ಟೇ..., ನಿನಗೆ ಚಿರ ಪರಿಚಿತ!
ಯಾಕೆ ? ನಿನ್ನ ಬೆನ್ನ ಹಿಂದೆ
ತೆಗಳಿ ಉಗುಳಿ ಹೀಯಾಳಿಸಿ
ನಿನ್ನ ಚಿತ್ರಕ್ಕೆ ಬಳಿದ ಮಸಿ..., ನಿನ್ನದಲ್ಲವೆ ?


ನೀನು, ನಿನ್ನರ್ಧವ ಒಪ್ಪದ ಮಾತ್ರಕೆ
ಅವು ಇನ್ಯಾರವೋ ಭಾವನೆಗಳಾಗಿಬಿಡುವುವೆ ?
ಮೂರ್ಖ,
ಅದರೊಟ್ಟಿಗೆ ಹೋರಾಟವ ಬಿಟ್ಟು,
ಕರೆದು, ಮುಟ್ಟಿ ಮಾತನಾಡಿಸು, ಸ್ವೀಕರಿಸಿ ಪ್ರೀತಿಸು

ಅರ್ಧ ಕಾಮನಬಿಲ್ಲೇ ಇಷ್ಟು ಸುಂದರ
ಕಾಣದ ಇನ್ನರ್ಧ ಅರಿತಾಗ
ಅದು ಇನ್ನೆಷ್ಟು ಸುಂದರ.

- ಬುರುಡೆ ದಾಸ 


Comments