ದಿನವೂ ಬರುತಿದ್ದ ಅಂಬಾ
ಇಂದೇಕೋ ಬರಲಿಲ್ಲ !..
ನಿನಗಾಗಿ ಬಚ್ಚಿಟ್ಟ ಬಾಳೆ ಹಣ್ಣ
ನಾನೇನು ಮಾಡಲಿ?
ಬೀಗನೆ ಎದ್ದು,
ಅಪ್ಪನೊಟ್ಟಿಗೆ ಸ್ನಾನ ಮಾಡಿ, ವಿಭೂತಿ ಧರಿಸಿ,
ತಿನಿಸುವ ತಿಂಡಿಯ ಗಪಗಪನೆ ತಿಂದು,
ಜಗುಲಿಯಲಿ ಕೂತು,
ಅಜ್ಜಿ ಹೇಳುವ ಕತೆ ಕೇಳುತ,
ನೀನು ಮೆತ್ತಗೆ ಅತ್ತಿಂದಿತ್ತ ಇತ್ತಿಂದತ್ತ
ಕೊಂಬಾಡಿಸುತ ನಿನ್ನದೇ ಅನನ್ಯ ಶೈಲಿಯಲಿ
ಬರುವುದ ಕಾಯುವುದೇ ನನ್ನ ದಿನಚರಿ
ನಿನ್ನದು ಅದೇನು ಗಾಂಭೀರ್ಯ
ಕೇರಿಯ ಇತರೆ ಹಸುಗಳು
ನೀನು ಬರುತ್ತಲೇ ಸುಮ್ಮನೆ
ಜಾಗ ಕಾಲಿ ಮಾಡಿದ್ದ,
ನಾನು ನೋಡಿಲ್ಲೆಂದು ತಿಳಿದೆಯಾ?
ನನಗೆ ಗೊತ್ತು! ನಿನ್ನ ಮಾತ ಇವರೆಲ್ಲರೂ,
ಹಿಂದು ಮುಂದಾಡದೆ ಪಾಲಿಸೂವರೆಂದು….
ಕೆರಿಯಾ ಇತರೆ ಹುಡುಗರು
ಕೊಡುವ ಬಾಳೆಹಣ್ಣ,
ತಲೆಯಾಡಿಸಿ ಒಲ್ಲೆಯೆನ್ನುವ ನೀನು…
ನಾನು ಕೊಡುವ ಬಾಳೆ ಹಣ್ಣ
ಹಿಂದೂ ಮುಂದೆನ್ನದೆ ಚಪ್ಪರಿಸಿ ಏಕೆ ಮುಕ್ಕುವೆ ?
ಬಹುಶಃ ನಿನಗೂ ಗೊತ್ತೆಂದು ಕಾಣುತ್ತೆ,
ನನಗೆ ಕೊಟ್ಟ ಹಣ್ಣುಗಳನ್ನು ನಾ,
ಕದ್ದು ನಿನಗಾಗಿ ಬಚ್ಚಿಡುವೆನೆಂದು
ಇಂದು ಅದೇಕೋ,
ಸಂಜೆಯಾದರೂ ನೀನು ಬರುವಂತೆ ಕಾಣುತಿಲ್ಲ
ನಿನಗೆ,
ಹುಷಾರಿಲ್ಲವೇ?
ಯಾವುದಾದರೂ ಹೋರಿ ಹಾದು ಗಾಯ ಮಾಡೀತೇ?
ನಿನ್ನ ಕರು ಬರಲಿಲ್ಲೆಂದು ಹುಡಿಕಿ ಹೋರಟೆಯ?
ಯಾರಾದರೂ ನಿನ್ನ ಹಿಡಿದು ಕಟ್ಟು ಹಾಕಿದರೆ?
ಎಂದೆಲ್ಲ ಪ್ರಶ್ನೆಗಳು ಮೂಡುತಿವೆ
ಇರಲಿ,
ನಿನ್ನ ಪಾಲ ಈ ಹಣ್ಣ
ನಾ ತಿನ್ನಲಾರೆ...! ಹಾಗೆಯೇ ಎತ್ತಿಡುವೆ
ನಾಳೆಗೆ ಸ್ವಲ್ಪ ಕಪ್ಪಾದರೂ
ಸಾವರಿಸಿಕೊಂಡು ತಿನ್ನು
ದಿನವೂ ಬರುತಿದ್ದ ಅಂಬಾ
ಇಂದೇಕೋ ಬರಲಿಲ್ಲ!..
ನಿನಗಾಗಿ ಬಚ್ಚಿಟ್ಟ ಬಾಳೆ ಹಣ್ಣ
ನಾನೇನು ಮಾಡಲಿ?
-
ಬುರುಡೆ ದಾಸ
Comments
Post a Comment