ಎಲ್ಲವೂ ನೀನೇ ಆಗಿರುವಾಗ


ಇಲ್ಲಿ,
ಯಾವ ಅಂತ್ಯವೂ ಮುಖ್ಯವಲ್ಲ,
ಶುರುವಾದದ್ದು ಎಂದಿಗೂ ಮುಗಿಯದಿರುವಾಗ
ಯಾವ ಲಿಂಗವೂ ಪ್ರಮುಖವಲ್ಲ,
ಒಂದಿಲ್ಲದೆ ಇನ್ನೊಂದು ಅಪೂರ್ಣವಾಗಿರುವಾಗ
ಯಾರೂ ಶ್ರೀಮಂತರಲ್ಲ,
ಎಷ್ಟು ಪಡೆದರೂ ಆಸೆ ತೀರದಿರುವಾಗ
ಯಾರೂ ಜ್ಞಾನಿಗಳಲ್ಲ,
ಎಷ್ಟು ತಿಳಿದರೂ ಸಾಲದಿರುವಾಗ  
ಯಾವೊದೂ ಕುರೂಪವಾಗಿಲ್ಲ,
ಸೌಂದರ್ಯ ವಸ್ತುಗಳಲ್ಲಿ ಅಡಕವಾಗಿಲ್ಲದಿರುವಾಗ  
ಯಾವುದೂ ಕೆಡುಕಲ್ಲ,
ಎಲ್ಲ ಕೆಡುಕಲ್ಲು ಒಳ್ಳೆಯದಿರುವಾಗ
ಯಾವ ಭಾಷೆಯೂ ಕಿರಿಯದಲ್ಲ,  
ಕೇವಲ ಒಂದು ಸಂವಹನ ಮಾಧ್ಯಮವಾಗಿರುವಾಗ
ಯಾವುದೂ ಹಳತಲ್ಲ,
ನಿನಲ್ಲಿ ಹೊಸತನ ತುಂಬಿರುವಾಗ
ಯಾವುದೂ ಕೊಳಕಲ್ಲ,
ನೀನು ಆಂತರ್ಯದಿ ಶುಚಿಯಾಗಿರುವಾಗ
ಇಲ್ಲಿ ಯಾವುದೂ ಒಂದರಿಂದ ಇನ್ನೊಂದು ಬೇರ್ಪಟ್ಟಿಲ್ಲ,
ಎಲ್ಲವೂ ಒಂದರೊಳಗೊಂದು ಬೆರೆತಿರುವಾಗ
ಎಲ್ಲವೂ ನೀನೆ ಆಗಿರುವಾಗ. 

- ಬುರುಡೆ ದಾಸ 




Comments