ಅಲೆಮಾರಿಯಂತೆ


ಅತ್ತಾಗ ಮೇಲೆತ್ತಿದೆ
ನಕ್ಕಾಗ ಅಪ್ಪಿ ಆಲಂಗಿಸಿದೆ
ನಾನಿಂದು ತುಂಬಿರುವೆ
ನೀನು ಕೊಟ್ಟ, ಅರೆಕ್ಷಣದ ನೆಮ್ಮದಿ
ಕೆಲನಿಮಿಷದ ಸಾಂತ್ವನ
ಬೇಡವೇ ನಿನಗೆ ವಾಪಸ್ಸು?
ಏಕಿಷ್ಟು ಸ್ವಾರ್ಥಿಯಾದೆ ?

ಅಂದು ನಾ ಹೊರಟಿದ್ದೆ,  
ನನ್ನದೇ ಸರಿ ಎಂದು
ಕೆನ್ನೆಗೆ ಬಿಗಿದು, ಖೋಳ ತೊಡಿಸಿ
ತಲೆಗೆ ತಟ್ಟಿ ತೋರಿದೆ
ಸರಿ ಮಾಡಲು ಹೊರಟ,
ಕೋಟಿ ಜನರು ಮಾಡಿದ ತಪ್ಪ
ಇಂದು ನೀನೇ ಸರಿಯೆಂದು ನಾ ಕೂಗಲು,
ನೀ ಹೇಳದೆ ಮರೆಯದೆ 
ಯಾರೊಟ್ಟಿಗೆ ಕೂಗಲಿ ಈ ಘೋಷಣೆಯ?

ಅಂದು ನಾನಿದ್ದೆ,
ನನ್ನ ದಾರಿಯೇ ರಾಜಮಾರ್ಗವೆಂದು
ಜುಟ್ಟು ಹಿಡಿದು, ಬೆನ್ನಿಗೆ ಗುದ್ದಿ
ಬೊಟ್ಟು ಮಾಡಿ ತೋರಿದೆ  
ಅದಾಗಲೇ ಕೋಟಿ ಜನರು
ನಡೆದ ಹೆದ್ದರಿಯೇ ಇದೆಯೆಂದು
ಇಂದು ದಣಿವಾರಿಸಲು ನಾ ಕೂರಲು,
ನೀ ತಿಳಿಯದೆ ಮರೆಯಾದೆ
ಯಾರೊಟ್ಟಿಗೆ ಸವಿಯಲಿ ಈ ನೆರಳ?

ಅಂದು ನಾನಿದ್ದೆ,
ನನ್ನನೇ ನೋಡುತಿರುವರೆಂಬ ಸೊಕ್ಕಲಿ
ಮಸಿ ಎರಚಿ, ಮಿಣುಕು ಬಟ್ಟೆಯ ಹರಿದು
ದೀಪ ಹಚ್ಚಿ ತೋರಿದೆ
ಸ್ವಲ್ಪ ಹೊತ್ತು ಮಿಣುಕುವ
ನನ್ನ ಬೆಳಕು ನಿಮಿತ್ತವೆಂದು
ಇಂದು ದಿಗಂತದಿ ಹುಟ್ಟುವ ಬೆಳಕ ನಾ ನೋಡಲು,
ನೀ ಕಾಣದೆ ಮರೆಯದೆ
ಯಾರೊಟ್ಟಿಗೆ ನೋಡಲಿ ಈ ಸೂರ್ಯೋದಯವ ?

ಬಹುಷಃ ನಿನ್ನ ಕಸುಬೇ ಅಷ್ಟೆಂದು ಕಾಣುತ್ತೆ
ಕಣ್ಣಿಗೆ ಕಟ್ಟಿದ ಪೊರೆಯ ಊದಿ
ಕಾಲಿಗೆ ಅಂಟಿದ್ದ ಚಕ್ರವ ಮುರಿಯಿಸಿ
ದೇಹಕ್ಕೆ ಹೊಲಿದಿದ್ದ ಚರ್ಮವ ಸುಲಿಸಿ
ಅಲೆಮಾರಿಯಂತೆ ಹುಡುಕಲು ಹಚ್ಚಿ
ಬಿಟ್ಟು ಹೋಗುವುದು.

-      ಸದಾನಂದ











Comments