ಆದೀತೆ ಎಂದಾದರು


ಅದೆಷ್ಟು ಬೆದರಿಸಿ ಧಿಕ್ಕರಿಸಿ
ಮಾಡಿದರೂ ನಿನ್ನ ಮೂಲೆಗುಂಪು
ಆದೀತೆ ಎಂದಾದರೂ
ನೀನು ಮಾತಾಡಿ ಹೋದ
ಅಕ್ಕರೆಯ ಆ ಪ್ರೀತಿಯ ಮಾತುಗಳ
ಹಿಡಿದಿಡಲು ಯಾರಿಗೊ ಕೇಳದಂತೆ?
ನುಡಿಯವೆ ಅವು ಸದ್ದಿಲ್ಲದೇ
ಇವರುಗಳು ಸ್ವೀಕರಿಸಲೊಲ್ಲದ
ಅದೇ ಹಳೆಯ ಸತ್ಯವ?


ಅದೆಷ್ಟೋ ಹೆದರಿಸಿ ಬಲವಂತದಿ  
ಬಚ್ಚಿಟ್ಟರೂ ಗುಪ್ತ ಸುರಂಗದಿ
ಆದೀತೆ ಎಂದಾದರೂ
ನೀನು ಬರೆದಿಟ್ಟು ಸತ್ತ
ಕೆಚ್ಚೆದೆಯ ಆ ಕ್ರಾಂತಿಯ ವಿಚಾರಗಳ
ಹುದುಗಿಸಲು ಯಾರಿಗೂ ಕಾಣದಂತೆ?
ಸಾರವೇ ಅವುಗಳು ಗುರುತಿಲ್ಲದೆ   
ಇವರುಗಳು ಸ್ವೀಕರಿಸಲೋಲ್ಲದ
ಅದೇ ಹಳೆಯ ಸತ್ಯವ ?


ಅರಿಯರೇಕೆ ಇವರು?
ಆಕಾಶದಿ ನೀಲಿಯ ಹಾಲಲಿ ಬಿಳಿಯ
ಅದ್ಯಾರೂ ತಂದು ಅಲ್ಲಿ ಕದಡಲಿಲ್ಲೆಂದು
ಹಾರಿಸಿದರು ಇವರು
ತುಂಬುವಷ್ಟು ಕಡಲ ಸ್ಯಾಟಲೈಟುಗಳ
ಸೇರಿಸಿದರು ಇವರು
ತುಂಬುವಷ್ಟು ಪಾತ್ರೆಯ ಹೊಸನೀರ
ಆದೀತೆ ಎಂದಾದರು
ಕಡಲೊಳು ನೀಲಿ ಹಾಲೊಳು ಬಿಳಿ
ತಡೆಯಲು ಒಂದರೊಳಗೊಂದು ಸೇರದಂತೆ ?


ಆದೀತೆ ಎಂದಾದರು
ಮತ್ತೆ ಮತ್ತೆ ಎದ್ದೆದ್ದು ರಾಚುವ
ಈ ಹಳೆಯ ಸತ್ಯವ...
ಕೇಳದಿರಲು.. ನೋಡದಿರಲು.. ಮುಟ್ಟಿ ಮಾತಾಡಿಸದಿರಲು ?

-      ಸದಾನಂದ


Comments