ಐ - ಫೋನ್

ಅವಳ ಬಹುದಿನದ ಹಟದಂತೆ, ಹದಿನಾರನೆಯ ಹುಟ್ಟುಹಬ್ಬಕ್ಕೆ ನೀಲಿ ಬಣ್ಣದ ಐ ಫೋನನ್ನು ಅವಳಿಗೆ ಉಡುಗೊರೆಯಾಗಿ ಕೊಡುವಾಗಲೇ ಅವನು ಬರಬಹುದಾದ ಆಗು ಹೋಗುಗಳನ್ನು ನೂರು ಬರಿ ಯೋಚಿಸಿದ್ದ. ಆದರೆ ಇಂತಹದ್ದೊಂದು ಸನ್ನಿವೇಶ ಬರುತ್ತದೆಂದು ಅವನ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಅದೆಷ್ಟೋ ಬಾರಿ ಇಂತಹ ವಿಚಾರಗಳಿಗೆ ಅವನಿಗೂ ಅವಳಿಗೂ ವಿವಾದಗಳಾಗಿದ್ದವು. ಹುಟ್ಟುಹಬ್ಬಕ್ಕೆ ಇನ್ನೈದು ದಿನ ಅನ್ನಬೇಕಾದರೆ ಬೆಳೆದ ಇಂತಹದ್ದೊಂದು ಏರುದನಿಯ ವಾಗ್ವಾದದ ಅಂತ್ಯಕ್ಕೆ, ಬಾಗಿಲನ್ನು ದಡಾರನೆ ದೂಡುವ ಮುನ್ನ ಅವಳಂದ ಮಾತುಗಳು ಅವನ ಮನಸನ್ನು ತೀವ್ರವಾಗಿ ನಾಟಿದ್ದವು. “ಅಮ್ಮನ ಬದಲು ನೀನು ಹೋಗಬೇಕಿತ್ತು! ಅಟ್ ಲೀಸ್ಟ್ ನಂಗೆ ನೆಮ್ಮದಿಯಾಗಿ ಬದುಕಕ್ಕಾದರು ಬಿಟ್ಟಿರುತ್ತಿದ್ದಳು”.

ಅಂದು ಅವಳ ಹುಟ್ಟುಹಬ್ಬದ ದಿನ ತನ್ನ ತಲೆದಿಂಬಿನ ಅಡಿ ನೀಲಿ ಬಣ್ಣದ ಐ ಫೋನನ್ನು ಕಂಡಾಗ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಕೋಣೆಯಲ್ಲಿ ಮಾರನೆಯ ದಿನ ಹುಡುಗರಿಗೆ ಹೇಳಬೇಕಾಗಿದ್ದ ಮೋಲಿಕ್ಯುಲರ್ ಡೈನಾಮಿಕ್ಸ್ ಪಾಠದ ಕ್ಲಿಷ್ಟವಾದ ಒಂದು ಭಾಗದಲ್ಲಿ ಎಂದಿನಂತೆ ತನ್ನ ಆರಾಮು ಕುರ್ಚಿಯ ಮೇಲೆ ಕುಳಿತು ತಲ್ಲೀನನಾಗಿದ್ದಾಗ,  ಸದ್ದು ಮಾಡದೇ ಹಿಂದಿನಿಂದ ಬಂದು ಅವನನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ತನ್ನದು ತಪ್ಪಾಯಿತೆಂದು ಅವಳಳುವಾಗ ಒಮ್ಮೆಲೇ ಅವಳಮ್ಮಳಷ್ಟು ಪ್ರೌಢಳಾಗಿ ಕಂಡು ಅವನ ಕಣ್ಣುಗಳು ಸಣ್ಣಗೆ ಹನಿಗೂಡಿದವು. ಅವಳ ತಂದೆಯಾಗಿ, ಈ ಸಂತಸವನ್ನು ತಾನೇಕೆ ಅವಳಿಂದ ಕಸಿದುಕೊಂಡಿದ್ದೆ ಎಂಬ ಪ್ರಶ್ನೆ ಅಂದು ಅವನನ್ನು ಬಹಳವಾಗಿ ಕಾಡಿತ್ತು.

ಇದಾಗಿ ಎರಡೇ ವಾರಕ್ಕೆ ಮತ್ತಿನೊಂದು ಲೀಜರ್ ಬ್ರೆಕಲ್ಲಿ ತನ್ನ ನೋಕಿಯಾ ೬೬೦೦ ಕೀಪ್ಯಾಡಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ  ಎಡಬಿಡದೆ ಓಡಾಡುವ ಹಾವನ್ನು ಒಂದರಮೇಲೊಂದರಂತೆ ಮೂಡುವ ಗುರಿಯೆಡೆಗೆ ಹೊರಲಾಡಿಸುವಾಗ, ಎಂದೂ ಫೋನು ಮಾಡದ ತನ್ನ ಪಕ್ಕದ ಮನೆಯ ಅಜ್ಜಿ ಫೋನು ಮಾಡಿದಾಗ ಅವನಿಗೆ ಇನ್ನಿಲ್ಲದ ಆಶ್ಚರ್ಯವಾಯಿತು. “ಅಪ್ಪ.. ಎಲ್ಲಿದ್ದಿಯಪ್ಪ?” ಎಂದು ಅಜ್ಜಿ ಗಾಬರಿಗೊಂಡು ಒಂದೇ ಉಸಿರಿನಲ್ಲಿ ಕೇಳಲು ತನ್ನ ಮೊಬೈಲ್ ಫೋನಿನಿಂದ ಹಾವು ನೇರವಾಗಿ ಎದ್ದು ಜಕ್ಕನೆ  ಕೈಗೆ ಕುಟುಕಿದಂತೆ ಭಾಸವಾಯಿತು. ಅತ್ತಲಿಂದ ಅಜ್ಜಿ “ಅಪ್ಪ ಜಲ್ದಿ ಹೋಗಿ ನಿನ್ನ ಮಗಳ್ನ ನೋಡಪ್ಪ... ವಿಕ್ಟೋರಿಯಾ ಆಸ್ಪತ್ರೆಗೆ ಕರ್ಕೊಂಡ್ ಹೋದ್ರು” ಎಂದು ಮುಂದುವರೆಯಲು ಅವನ ಎದೆಬಡಿತ ಜೋರಾಗಿ ಫೋನನ್ನು ಕಿವಿಗೆ ಒತ್ತಿಡಿದಿದ್ದ ಕೈಗಳು ನಡುಗಹತ್ತಿದವು.”ಅವ್ಳು ಮೊಬೈಲ್ ನೋಡ್ಕೊಂಡು ರಸ್ತೆ ದಾಟ್ತಿದ್ಲು ಅನ್ಸುತ್ತೆ ಎದುರಿನಿಂದ ಜೋರಾಗಿ ಬಂದ ಬೈಕು ಗುದ್ಬುಟ್ಟಿದೆ“ ಎಂದು ಹೇಳಿ ಅಜ್ಜಿ ಮಾತು ನಿಲ್ಲಿಸುವಾಗ ತನ್ನ ಬಯಲಾಜಿ ಡಿಪಾರ್ಟ್ಮೆಂಟಿನ ಟೀಚರ್ಸ್ ರೂಮಿನ ಛಾವಣಿಯೇ ಕಳಚಿ ಬಿದ್ದಂತಾಗಿ ಕುಸಿದನು.

ಗರ ಬಡಿದವನಂತೆ ತನ್ನ ಹಳೆಯ ಮಾರುತಿ ಕಾರನ್ನು ಟಿನ್ ಫ್ಯಾಕ್ಟರಿ ಜಂಕ್ಷನ್ನಿನಲ್ಲಿ ಒಂದೊಂದೇ ಇಂಚು ನೂಕಿಸಿಕೊಂಡು ಚಾಲಿಸುವಾಗ ತಾನದೆಷ್ಟು ಒತ್ತುಹಿಡಿದರೊ ತನ್ನ ಸುಪ್ತ ಮನಸ್ಸು ಮತ್ತೆ ಮತ್ತೆ ಮುಂದಾಗಬುದಾದ ಸನ್ನಿವೇಶಗಳ ಸಿಮುಲೆಶನ್ನುಗಳನ್ನು ಭಿತ್ತರಿಸಿ ತನನ್ನು ಅತ್ತಂಕಿತನನ್ನಾಗಿ ಮಾಡುತಿತ್ತು. ಅಂದು ಕೋಪದಲ್ಲಿ ಅವಳಂದ ಸಾಲುಗಳು ಕೊನೆಯೇ ಇಲ್ಲದ ಟೇಪ್ರಿಕಾರ್ಡರ್ನಂತೆ ಮತ್ತೆ ಮತ್ತೆ ಮರುಕಳಿಸುತ್ತಿರಲು ತನ್ನ ಪಕ್ಕದ ಸೀಟಿನಲ್ಲಿ ಬಿದ್ದಿದ್ದ ನೋಕಿಯ  ೬೬೦೦ ಫೋನು ಮತ್ತೊಮ್ಮೆ ಚೀರತೊಡಗಿದಾಗ ಹಸಿರು ಗುಂಡಿ ಒತ್ತುವ ಧೈರ್ಯ ಸಾಲದೆ ಸ್ಕ್ರೀನನ್ನು ಹಾಗೆ ನೋಡಹತ್ತಿದ. ಪ್ಹೂನಿನೆಡೆಗೆ ನೋಡುವಾಗ ತನ್ನ ಬ್ರೇಕಿನ ಮೇಲಿದ್ದ ಕಾಲುಗಳು ಅರಿವಿಲ್ಲದೆ ತುಸು ಹೆಚ್ಚು ಕಾಲ ಅಲ್ಲಿಯೇ ಉಳಿಯಲು ಒಮ್ಮೆಲ್ಲೆ ಹಿಂದಿನಿಂದ ಹಾರ್ನುಗಳ ಸುರಿಮಳೆಯೇ ಬರತೊಡಗಿತು.
- ಸದಾನಂದ 


Comments