ಹೇಳಿದ್ದರೆ ಅಂದು - ಕವಿತೆ


ಅದೆಷ್ಟು ಮಾಸಗಳು ಮಾಸಿದವೊ
ಅದೆಷ್ಟು ಬಾರಿ ಸೂರ್ಯ ಚಂದಿರರು
ನನ್ನ ಮೊಗ ನೋಡಿ ನಸುನಕ್ಕು
“ಹೇಳಿದ್ದರೆ ಅಂದು” ಎಂದಷ್ಟೇ ಹೇಳಿ
ಕಡೆಯ ದಿನದ ಆ ಸಂಜೆಯ ಮತ್ತೆ ಕಾಣಿಸಿ
ತಳ್ಳಿದ್ದರೋ ನನ್ನ ಮತ್ತದೇ
ಮುಸ್ಸಂಜೆಯ ಪ್ರಶಾಂತ ಏಕಾಂತಕ್ಕೆ.

ನಿನ್ನ ಕೆನ್ನೆ ಸವರಿ ತುಸುವೇ ಬಿಸಿಯಾಗಿ
ತಂಪಾಗಲು ನನ್ನ ಬೀಗಿದಪ್ಪುತ್ತಿದ್ದ ಗಾಳಿ
ನಿನ್ನ ಕುಡಿನೋಟದಿ ನೆಂದು ಒದ್ದೆಯಾಗಿ
ಮೈಯಾರಿಸಲು ನನ್ನೊಳು ಹರಟುತ್ತಿದ್ದ
ಕ್ಲಾಸ್ರೂಮಿನ ಕಿಟಕಿ ಬಾಗಿಲು ಡೆಸ್ಕು
ನಿನ್ನಿಡೀ ಭಾರವ ಹೊತ್ತು ಸುಸ್ತಾಗಿ
ಸ್ಟಾಂಡಿನ ನೆರಳಲಿ ದಣಿವಾರಿಸಲು
ನನ್ನ ಕೂಗಿ ಕರೆಯುತ್ತಿದ್ದ ನಿನ್ನ ಸೈಕಲ್
ಹೇಳಬಾರದಿತ್ತೆ ಅಂದು ನಿನಗೆ
ದೂರದಿ ನಿನ್ನ ನೋಡಿಯೂ ನೋಡದೆ
ತಲೆಬಗ್ಗಿಸಿ ನೋಡುತಿದ್ದ ನನ್ನ ನೋಡಿ
“ನೋಡಲ್ಲಿ!”

ಇನ್ನದೆಷ್ಟು ಬಾರಿ ಈ ಸೂರ್ಯ ಚಂದಿರರು
ಹೀಯಾಳಿಸುವರೋ ನನ್ನ ನಾ ಕಾಣೆ

-  ಸದಾನಂದ

ಅವಧಿಯಲ್ಲಿ ಪ್ರಕಟವಾದುದನ್ನು ನೋಡಲು ಕೆಳಗಿರುವ ಲಿಂಕ್ ಅನ್ನು ಒತ್ತಿ 
ಹೇಳಿದ್ದರೆ ಅಂದು - ಕವಿತೆ(ಲಿಂಕ್)

Comments