ಕನ್ನಡಿ - ಕವಿತೆ


ಅಲ್ಲೊಂದು ಕನ್ನಡಿ 
ತುಂಬೆಲ್ಲಾ ಚಿತ್ರಗಳು 
ನಕ್ಕಾಗ ನಗುವುವು, ಅತ್ತಾಗ ಅಳುವುವು 
ಇಣುಕುವ ಚಿತ್ರಗಳು 
ನಕ್ಕಂತೆ ಆಳುವ, ಆತ್ತಂತೆ ನಗುವ 
ಸೋಗು ಹಾಕಿದಾಗಲೂ 
ಅಂತಂತೆಯೇ ನಕ್ಕು, ಆಳುವ 
ಪೆದ್ದುಪೆದ್ದಾಗಿ ಇಣುಕುವ ಚಿತ್ರಗಳು; ತಿಳಿಯದೇಕೆ ಅವಕ್ಕೆ 
ಅದು ನಗುವಿನಲ್ಲಿಯ ಅಳು, ಅಳುವಿನಲ್ಲಿಯ ನಗುವೆಂದು? 
ಪಾಪ ! ತಿಳಿಯಬೇಕಾದರೂ ಹೇಗೆ?
ಬೇವಿನೊಳಗಿನ ಕಹಿ, ಸಕ್ಕರೆಯೊಳಗಿನ ಸಿಹಿಯಂತೆ 
ನಾಟ್ಯಧಾರಿಗಳ ಭಂಗಿಗಳಲ್ಲಿ,
ವೇಷಧಾರಿಗಳ ತೀಡಿದ ಮುಖವಾಡಗಳಲ್ಲಿ,
ಬೆಚ್ಚಗೆ, ಚೌಕಟ್ಟಿನ ಫ್ರೇಮಿನೊಳಗೆ,
ಪಿಳಿ ಪಿಳಿ ಕಣ್ಬಿಡುತ್ತ ಕೂತಿರುವಾಗ!
೩ 
ಹಿಡಿವೆವು ಕನ್ನಡಿ, ಸಮಾಜದ ಕಣ್ಣಿಗೆ 
ಎಂಬರು ಹೊಣೆಹೊತ್ತ ಧುರೀಣರು 
ಹಿಡಿವರು ಕನ್ನಡಿ, ಕಟ್ಟಿದಂತೆ ಕಣ್ಣಿಗೆ 
ಸುಳ್ಳು, ಕೇಸರಿಭಾಷಣ, ಮಸಲತ್ತುಗಳ
ಅರೆ ಬರೆ ಹುಸಿ ಕಚ್ಚಾಟ. 
೪ 
ಎಡ ಬಲವಾಗಿ, ಬಲ ಎಡವಾಗಿ 
ಇಲ್ಲಿ ಕಾಣುವ ಮಾತ್ರಕೆ 
ಸಿಹಿಯ ಕಹಿಯಾಗಿಸಿ, ನಿಜವ ಹುಸಿಯಾಗಿಸಿ, 
ಮಾರಾಟಮಾಡುವ ಸೇಲ್ಸ್ ಮನ್ನುಗಳು
ಸುತ್ತುವರಿದಿರುವಾಗ ನಮ್ಮೀ ಕನ್ನಡಿಯ 
ಪಾಪ ! ಬರಬೇಕು ಅರಿವಾದರೂ.ಎಲ್ಲಿಂದ?
ನಕ್ಕವರು ಯಾರು? ಅತ್ತವರು ಯಾರು?
ಕನ್ನಡಿಗೂ ತಿಳಿಯದು, ಇಲ್ಲಿಯ ಚಿತ್ರಗಳಿಗೂ ತಿಳಿಯದು 
ಅವರವರ ಅರಿವಿಗಲ್ಲದೆ,
ಮತ್ಯಾರಿಗೂ ತಿಳಿಯದು
ಇಂದಿನ ಸತ್ಯವ ತಿಳಿಯಬೇಕಾದರೆ 
ನಕ್ಕಾಗ ಆಳುವ, ಅತ್ತಾಗ ನಗುವ 
ಕನ್ನಡಿಯ; ಹುಡುಕಿ ತೋರುವಿರಾ ?

-  ಸದಾನಂದ

Comments