ಆಸೆ ದುಃಖಕ್ಕೆ ಮೂಲ - ಕವಿತೆ


ಜಗವೆಲ್ಲ ನಿದ್ರಿಸಲು, ಒಬ್ಬನೆದ್ದು ಹೊರಟವ,
ಹೆಬ್ಬಲಸ ತೊಳೆ ಬಿಡಿಸಿದಂತೆ 
ಸಾರವ ಕೆದಕಿ, ಆತ್ಮವ ಹುಡುಕಿ 
ಕೂಗಿ ಜಗಕೆಂದ 
ಆಸೆ ದುಃಖಕ್ಕೆ ಮೂಲ 
ಆಸೆ ದುಃಖಕ್ಕೆ ಮೂಲ. 


ಹೌದೌದೆನ್ನುತ್ತಲೇ ಬಂದರು, ಸಾಲು ಹಿಡಿದು ಬಂದ 
ಗುಪ್ತ ಮೌರ್ಯ ಮರಾಠರು
ಗಾಂಧಿ ಅಂಬೇಡ್ಕರ್ ಲೋಹಿಯಾ. 
ಬಣ್ಣಬಳಿದು, ಚಿತ್ರಬಿಡಿಸಿ, ಹಾಡುಹಾಡಿ 
ಎಳೆಎಳೆಯ ಹೆಕ್ಕಿ ಪೋಣಿಸಿ ಅಂದರು 
ಆಸೆ ದುಃಖಕ್ಕೆ ಮೂಲ. 


ಆಚೆ ದಂಡೆಯ ಹಸಿರೆಂದರು, 
ಈಜಿ ದಡ ಸೇರಿದ ವೀರರು 
ಕೊಟ್ಟ ಕುದುರೆಯನೇರದವನೆಂದರು
ಟೊಂಕವೇರಿ ಮೆರೆದ ಜಗದೇಕ ಮಲ್ಲರು 
ಈಜ ಹೊರಡುವ ಮುನ್ನ, ಹಲ್ಲಣ ಏರುವ ಮುನ್ನ 
ತಿಳಿಯರೆ ? ಈ ಅಲೆಕ್ಸಾಂಡರ್, ಹಿಟ್ಲರ್,ನೆಪೂಲಿಯನ್
ಆಸೆ ದುಃಖಕ್ಕೆ ಮೂಲ. 


ತೂರೆದವ ಯೋಗಿ, ನೆರೆದವ ಭೋಗಿ 
ತೊರೆವೆನೆಂದು ನೆರೆವರು ಕಟ್ಟಿದರು 
ಗುರುಕುಲ ಪೀಠ ಮಠ ದೇಗುಲ 
ನೆರಳು ಭವದೊಳಿತಿಗೆಂದಾದರೆ 
ಬಿತ್ತ ಬೀಜ ಹೆಮ್ಮರವಾಗಲೆಂದು ಹಂಬಲಿಸುವ 
ಭೂಮಿಗಿಳಿದ ದೇವಮಾನವರು, ತಿಳಿಯರೇ ? 
ಆಸೆ ದುಃಖಕ್ಕೆ ಮೂಲ. 


ಪುಟ ಪುಟದಿ ಓದಿದರು, ಹೆಜ್ಜೆ ಹೆಜ್ಜೆಗೆ ಕಂಡರು 
ಆಕ್ಸ್ ಫರ್ಡ್, ಕೇಂಬ್ರಿಜ್, ಓದಿಬಂದ 
ನಕಲಿ ಮುತ್ತು, ರತ್ನ, ಹವಳರು 
ಅರಿಯರೆ, ಹಿರೂಶಿಮಾ ಕೆಡವುವ ಮುನ್ನ,
ವರ್ಲ್ಡ್ ಟ್ರೇಡ್ ಕಟ್ಟುವ ಮುನ್ನ,
ಆಸೆ ದುಃಖಕ್ಕೆ ಮೂಲ. 


ತಿಳಿವೆನೆಂದರೂ ತಿಳಿಯದು, ಅರಿವೆನೆಂದರೂ ಆಗದು 
ಬಿಸಿಲ ಮಳೆಯ ಬಿಲ್ಲ ಹಿಡಿದಂತೆ,ಅದು 
ರೆಪ್ಪೆ ಬಡಿತದ ಕ್ಷಣಮಾತ್ರದಿ 
ಹಿಡಿದುಬಿಡುವ ಸಮೂಹ ಸನ್ನಿ
ಬರೆದನೇ ಬುದ್ದ ತ್ರಿಪಿಟಕದಿ 
ತನ್ನರಿವ ಜಗ ತಿಳಿಯಲೆಂಬ ಆಸೆ ಹೊತ್ತು
ಆಸೆ ದುಃಖಕ್ಕೆ ಮೂಲ. ಆಸೆ ದುಃಖಕ್ಕೆ ಮೂಲ.

-  ಸದಾನಂದ 

Comments