ಅಂತರ್ಜಾಲ ಆಯ್ಕೆಯ ಬಿಕ್ಕಟ್ಟುಗಳು



ನೀವು ಎಂದಾದರು ಯೋಚಿಸಿದ್ದೀರ! ದಿನನಿತ್ಯವೂ ಹರಿದಾಡುತ್ತಿರುವ, ಮನಸ್ಸಿನ ನೆಮ್ಮದಿ ಕೆಡಿಸುವ ನೆಗೆಟಿವ್ ವಿಚಾರಗಳನ್ನು ನಮ್ಮ ಮಾತುಗಳಲ್ಲಿ, ಯೋಚನೆಗಳಲ್ಲಿ, ವ್ವ್ಯವಹಾರಗಳಲ್ಲಿ, ಹರಟೆಗಳಲ್ಲಿ, ಮಹಿಳೆಯರ ಚರ್ಚೆಗಳಲ್ಲಿ ಬಹುತೇಕ ಸಾರಿ ಸುದ್ದಿ ಮೂಲ ಯಾವುದು ಅಂತ ? ಉದಾಹರಣೆಗೆ ಹೇಳಬೇಕೆಂದರೆ ಇತ್ತೀಚೆಗೆ ನಡೆದ ಕೊಲೆಗೆ ಸಂಬಂಧ ಪಟ್ಟ ಸುದ್ದಿ ಇರಬಹುದು; ಅದಕ್ಕೆ ರಾಜಕೀಯ ಪಕ್ಷಗಳು ನೀಡುವ ಪ್ರತಿಕ್ರಿಯೆಗಳಿರಬಹುದು; ದೇಶದ ವಿವಿದೆಡೆಗಳಲ್ಲಿ ಏಕಕಾಲಕ್ಕೆ ನಡೆಯುತ್ತಿರುವ ಪ್ರತಿಭಟನೆಗಳಿರಬಹುದು; ಅದಕ್ಕೆ ಸಂಭಂದಪಟ್ಟ ಇನ್ನಿತರೆ ಸಂಕೀರ್ಣ ಸಂಗತಿಗಳಿರಬಹುದು; ನಗರದ ಯಾವುದೋ ಒಂದು ಏ ಟಿ ಎಂ ನಲ್ಲಿ ಹಣ ಡ್ರಾ ಮಾಡಲು ಹೋದ ಮಹಿಳೆಯ ಮೇಲೆ ದುಷ್ಕರ್ಮಿಗಳು ಮಾಡಿದ ದಾಳಿಯಿಂದಾಗಿ ನಗರದ ಎಲ್ಲ ಏ ಟಿ ಎಂ ಗಳಲ್ಲಿಯೂ ಸುರಕ್ಷತೆಯ ಲೋಪವಿರುವುದಾಗಿ ಇಲ್ಲದ ಅಂಕಿ-ಅಂಶಗಳನ್ನು ಪ್ರದರ್ಶಿಸಿ ಜನರಲ್ಲಿ ಭಯದ ವಾತಾವರಣವನ್ನು ಹುಟ್ಟು ಹಾಕುವ ಸುದ್ದಿ ಇರಬಹುದು; ರಾಜಕೀಯ ನಾಟಕಗಳಿರಬಹುದು; ವಿವಾದಾತ್ಮಕ ಧಾರ್ಮಿಕ ವಿಚಾರಗಳನ್ನು ಪ್ಯಾನಲ್ಲುಗಳಿಗೆ ಎಳೆದು ಯಾರೋ ಒಬ್ಬರನ್ನು ದೂಷಿಗಳನ್ನಾಗಿ ಮಾಡಿ ನಡೆಸುವ ಚರ್ಚೆಗಳಿರಬಹುದು - ಕೊನೆಯೇ ಇಲ್ಲದ  ಇತ್ಯಾದಿ ಇತ್ಯಾದಿ ವಿಚಾರಗಳು.

ಸಮೂಹ ಮಾಧ್ಯಮಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಮಾಜದ ಒಟ್ಟು ಚಿಂತನೆಯನ್ನೇ ಬದಲಿಸಬಲ್ಲ, ಸಮಾಜವನ್ನು ಒಂದು ಸಿದ್ಧಾಂತದೆಡೆಗೆ ಪ್ರೇರೇಪಿಸುವ; ಅಷ್ಟೇ ಏಕೆ ಅದೆಷ್ಟೋ ಬಾರಿ ಕೆಲವು ದುರ್ಬಲ ಮನಸ್ಥಿತಿಯವರುಗಳು ಯೋಚಿಸುವ ರೀತಿಯನ್ನೇ ಸೂಕ್ಷ್ಮವಾಗಿ ದಬ್ಬಾಳಿಕೆಗೆ ಒಳಪಡಿಸುವ ಸಾಮರ್ಥ್ಯವನ್ನು ಕೂಡ ಹೊಂದಿವೆ. ಇಲ್ಲದಿದ್ದಿದ್ದರೆ ಹಿಂದಿನ ದಿನಗಳಲ್ಲಿ ಕೇವಲ ವೃತ್ತ ಪತ್ರಿಕೆಗಳ ಮೂಲಕ ಎಷ್ಟೋ ಚಳುವಳಿಗಳು ದೇಶಗಳ ಗತಿಯನ್ನೇ ಹೇಗೆ ಬದಲಿಸಬಲ್ಲವರಾಗುತಿದ್ದವು ? ಕೇವಲ ರೇಡಿಯೋ ಕಾರ್ಯಕ್ರಮಗಳ ಮೂಲಕ ಹೇಗೆ ಸರಕಾರಗಳು ಜನರಿಗೆ ತಮ್ಮ ಧೋರಣೆಗಳನ್ನು ತಲುಪಿಸುತ್ತಿದ್ದವು ? ಕೇವಲ ಜಾಹಿರಾತುಗಳ ಮೂಲಕ ನಾವು ನೀವುಗಳು ಹೇಗೆ ಈ ಕೊಳ್ಳುಬಾಕತನದ ಆಟಿಕೆಗಳಾಗುತ್ತಿದ್ದೆವು ? ಇಂಟರ್ನೆಟ್ ಈ ಸಮೂಹ ಮಾಧ್ಯಮಗಳಿಗೆ ಸೇರಿಕೊಂಡಿರುವ ಒಂದು ಶಕ್ತಿಶಾಲಿ ಮಾರ್ಪಾಡು ಎನ್ನಬಹುದು. ಅಷ್ಟು ಹಿಂದೆ ಯಾಕೆ , ನಮ್ಮ ನಿಮ್ಮ ನಡುವೆಯೇ ನಡೆಯುತ್ತಿರುವ ಬದಲಾವಣೆಗಳನ್ನು ಗಮನಿಸಿ. ನೀವುಗಳು ಇತ್ತೇಚೆಗೆ ಕೊಂಡ ಮೊಬೈಲ್ ಫೋನನ್ನು ಮೊದಲು ಎಲ್ಲಿ ಕಂಡದ್ದು ? ಇತ್ತೀಚೆಗೆ ನೀವು ಮಾಡಿಸಿದ ಹೊಸ ಕ್ಷೌರ ಯಾವ ಸಿನಿಮಾದ ನೆಚ್ಚಿನ ಹೀರೋ ಮಾಡಿಸಿದ್ದು ? ಒಂದು ವರ್ಗದವರು  ಇತ್ತೀಚಿಗೆ ಪ್ರತಿಭಟಿಸಿದ ಸಿನಿಮಾದ ವಿಚಾರಗಳು ಏಕೆ ನಿಮ್ಮನ್ನು ಅದರ ವಿರುಧ್ಧ ಕೂಗುವಂತೆ ಮಾಡಿದವು ?
ಮನುಷ್ಯ ಮೂಲಭೂತವಾಗಿ ಅನುಕರಣೆಯ ಮೂಲಕ ಕಲಿಯುತ್ತಾನೆ. ನಾವುಗಳು ಪ್ರಜ್ಞಾಪೂರ್ವಕವಾಗಿ ಯೋಚಿಸಿದರೂ, ಅರಿವಿಗೆ ಬಾರದಂತೆ ನಮ್ಮ ಮನಸ್ಸುಗಳು ನಿರಂತರವಾಗಿ ನಾವುಗಳು ನೋಡುವ, ಕೇಳುವ, ಮಾತನಾಡುವ ವಿಚಾರಗಳಿಂದ ಪ್ರೇರೇಪಣೆಗೊಳ್ಳುತ್ತಲೇ ಇರುತ್ತದೆ. ಅಂತೆಯೇ ನಮ್ಮ ನಡುವಳಿಕೆಗಳು ಕೂಡ ಬದಲಾಗುತ್ತಿರುತ್ತವೆ. ನಾವುಗಳು ಬಹುತೇಕ ಕಾಲ ಮಾಧ್ಯಮಗಳೊಂದಿಗೆ ಮಾಹಿತಿದಾರರಾಗಿ ಕಾಲ ಕಳೆಯುತ್ತೇವೆ. ನಮ್ಮ ನಡುವಿನ ಬಹುತೇಕ ಮಾಧ್ಯಮಗಳು ಋಣಾತ್ಮಕ ವಿಷಯಗಳನ್ನು ವೈಭವೀಕರಿಸುತ್ತವೆ.  ಬಹುತೇಕ ಸುದ್ದಿ ಮಾಧ್ಯಮಗಳು, ಟೀವಿ ಸಿರಿಯಲ್ಲುಗಳು, ರಿಯಾಲಿಟಿ ಶೋಗಳು, ವಾಟ್ಸ್ಅಪ್ ಸಂದೇಶಗಳು, ಫೇಸ್ಬುಕ್ ಅಂಚೆಗಳು ಪಬ್ಲಿಸಿಟಿ ಮತ್ತು ಟಿ.ಅರ್.ಪಿ ಗಿಟ್ಟಿಸುವುದಕ್ಕಾಗಿ ತಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಅಪಾಯಕಾರಿಯಾಗಿ ವರ್ತಿಸುತ್ತಿವೆ. ಈ ಆರೋಪವಿರುವುದು ಎಲ್ಲ ಸಮೂಹ ಮಾಧ್ಯಮಗಳ ಮೇಲಲ್ಲ. ಸಮಾಜವನ್ನು ಉತ್ತಮ ದಿಕ್ಕಿನೆಡೆಗೆ ನಡೆಸುವ ಪ್ರಯತ್ನವನ್ನು ಜವಾಬ್ದಾರಿ ಇರುವ ಕೇವಲ ಕೆಲವು ಮಾಧ್ಯಮಗಳು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತವೆ. ಕೇಂದ್ರ ಸರ್ಕಾರವು ನೇಮಿಸಿರುವ ಟ್ರಾಯ್ (TRAI) ನಿಯಂತ್ರಣ ಸಂಸ್ಥೆಯು ಕಣ್ಣು, ಕಿವಿ, ಹಲ್ಲು, ಉಗುರು ಇಲ್ಲದ ಬೆದರು ಗೊಂಬೆಯಾಗಿದೆ.
ನಮ್ಮ ಆಯ್ಕೆಗಳು ಮೋಹದ ಬಲೆಯಲ್ಲಿ ಸಿಲುಕಿವೆ. ಕಂಪ್ಯೂಟರೀಕರಣ ಮತ್ತು ಟಿವಿ ಪ್ರಸಾರಗಳು ಸಮಾಜವನ್ನೇ ನಿಯಂತ್ರಿಸುವಷ್ಟು ಅಪಾಯವನ್ನು ಸೃಷ್ಟಿಸುತ್ತಿವೆ ಸರ್ಕಾರವು ಇದು ನನ್ನ ಕೆಲಸವಲ್ಲ ಎಂಬಂತೆ ವರ್ತಿಸುತ್ತಿದೆ. ಹಾಗಾಗಿ ನಾವೇ ಈಗ ವಿವೇಚನೆಯ ನಡೆಯನ್ನು ಕಂಡುಕೊಳ್ಳಬೇಕಿದೆ. ನ್ಯಾಯಾಲಯ, ಸರ್ಕಾರ, ಮಾಧ್ಯಮ ನಿಯಂತ್ರಣ ಮಂಡಳಿಗಳು ದುರ್ಬಲ ಗೊಂಡ ಕಾರಣ ವಿವೇಚನೆ ಕೂಡ ನಮ್ಮೊಳಗೇ ಹುಟ್ಟಿಕೊಂಡು ಒಂದು ಪ್ರಬಲ ಸಂಘಟನೆಯಾಗುವ ಜರೂರು ತೀರ ಅಗತ್ಯವಾಗಿ ಕಂಡುಬರುತ್ತಿದೆ.

      - ಬುರುಡೆದಾಸ 

Comments